ಕನ್ನಡದಲ್ಲಿ ಎಂ.ಬಿ.ಎ. ಅಂದ್ರೆ ವಿಚಿತ್ರ ಅನ್ನಿಸೋ ವ್ಯವಸ್ಥೆ ರಿಪೇರಿ ಆಗಬೇಕು

ಮೈಸೂರಲ್ಲಿ ರಾಜೀವ ಸರಳಾಕ್ಷ ಅನ್ನೋರು ಒಲ್ಲದ ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಜೊತೆಗೆ ಏಗಿ ಏಗಿ ಕೊನೆಗೂ ಕನ್ನಡದಲ್ಲಿ ಎಂ.ಬಿ.ಎ. ಪರೀಕ್ಷೆ ತೊಗೊಂಡು ಪಾಸಾಗಿದಾರೆ ಅಂತ ಪ್ರಜಾವಾಣಿ ಕೆಲವು ದಿನದ ಹಿಂದೆ ವರದಿ ಮಾಡಿತ್ತು. ರಾಜೀವ ಇವತ್ತು ಒಬ್ಬ ವಿಚಿತ್ರ ಮನುಷ್ಯ ಅಂತ ಅನ್ನಿಸೋ ವ್ಯವಸ್ಥೆ ಸರಿಯಲ್ಲ ಗುರು! ನಮ್ಮ ಜನರಿಗಾಗೇ ಇರಬೇಕಾದ ನಮ್ಮ ವಿ.ವಿ.ಗಳು ನಮ್ಮದಲ್ಲದ ಒಂದು ಭಾಷೇಲಿ ಇಂಥಾ ಪದವಿಗಳ್ನ ಪಡ್ಕೋಬೇಕು ಅನ್ನೋ ಪೆದ್ದತನ ನಿಧಾನವಾಗಾದರೂ ನಿಲ್ಲಬೇಕು. ನಿಜವಾದ ಕಲಿಕೆಗೂ ನಮಗೂ ನಡುವೆ ಬೇರೆ ಒಂದು ಭಾಷೆ ಅಡ್ಡಗೋಡೆಯಾಗಿ ನಿಂತಿರೋದು ಸರೀನಾ ಅಂತ ಪ್ರಶ್ನೆ ಮಾಡೋಷ್ಟು ಸ್ವಂತ ಚಿಂತನೇನಾದ್ರೂ ನಮಗೆ ಬರಬೇಕು ಗುರು!

ಇವತ್ತಿನ ದಿನ ಕನ್ನಡದಲ್ಲಿ ಉನ್ನತ ಶಿಕ್ಷಣ ಇಲ್ಲ ಅನ್ನೋದೇನೋ ನಿಜ. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಕಲಿಕೆಯಾಗಲಿ ಮ್ಯಾನೇಜ್ಮೆಂಟಿನ ಕಲಿಕೆಯಾಗಲಿ ಇಲ್ಲ ಅನ್ನೋದು ನಿಜ. ಆದ್ರೆ ಇದೇ ವ್ಯವಸ್ಥೆ ಇನ್ನೆಂದೆಂದಿಗೂ ಇರಲಿ ಅಂತ ಒಂದು ರೀತಿ ಸೋಲೊಪ್ಪಿಕೊಂಡಿವೆಯಲ್ಲ ನಮ್ಮ ವಿ.ವಿ.ಗಳು, ಇದೆಷ್ಟು ಸರಿ? ನಮ್ಮ ವಿ.ವಿ.ಗಳ್ನ ನಾವು ಹುಟ್ಟಿಹಾಕಿಕೊಂಡಿರೋದು ನಿಜಕ್ಕೂ ನಮ್ಮ ಲಾಭಕ್ಕೇ ಅನ್ನೋದಾದರೆ ನಮ್ಮ ಜನರ ಭಾಷೆಯಲ್ಲೇ ಕಲಿಕೆಯ ಏರ್ಪಾಡು ಮಾಡೋದು ಇವರ ಗುರಿಯಾಗಬೇಡ್ವಾ ಗುರು?

ನಮ್ಮ ಎಷ್ಟು ವಿ.ವಿ.ಗಳಲ್ಲಿ ಇವತ್ತು ಬೇಡ, ಇನ್ನು ಐವತ್ತು ವರ್ಷದಲ್ಲಾದರೂ ಕನ್ನಡದಲ್ಲಿ ಉನ್ನತಶಿಕ್ಷಣ ಸಿಗೋಹಾಗೆ ಮಾಡಕ್ಕೆ ಯಾವ ಯೋಜನೆಗಳ್ನ ಹಾಕಿಕೊಂಡಿದಾರೆ? ನಿಧಾನವಾಗಿ - ಅಂದ್ರೆ ಇವತ್ತಿನ ಪರಿಸ್ಥಿತಿಯಲ್ಲಿ ಇಂಗ್ಲೀಷಿನ ಶಿಕ್ಷಣ ವ್ಯವಸ್ಥೆಯಿಂದ ಏನು ಪಡ್ಕೋಬೇಕೋ ಅದನ್ನೂ ಕೈಬಿಡದೆ - ಕಲಿಕೆಯ ಸೌಲಭ್ಯವನ್ನ ಕರ್ನಟಕದ ಮುಲೆಮೂಲೆಗಳಲ್ಲಿ ಅಡಗಿರೋ ಪ್ರತಿಭೆಗಳಿಗೆಲ್ಲಾ ಮುಟ್ಟಿಸೋ ಕೆಲಸಕ್ಕೆ ಧೈರ್ಯದಿಂದ ಕೈ ಹಾಕಬೇಕು. ಕನಸೇ ಕಾಣದೆ ಹೋದರೆ ನನಸಾಗೋದು ಹೇಗೆ ಗುರು?

Comments

Popular posts from this blog

ದುರ್ಗದ ಮಳೆ

ಅಮಾಸೆ