ದೃಶ್ಯ ಮಾಧ್ಯಮದ ಘನತೆ ಹೆಚ್ಚಿಸಿದ ಸಾಹಿತ್ಯ

ಕಡಲ ತಡಿಯಲಿ ಕನ್ನಡ ಡಿಂಡಿಮ

ದೃಶ್ಯ ಮಾಧ್ಯಮದ ಘನತೆ ಹೆಚ್ಚಿಸಿದ ಸಾಹಿತ್ಯ

ಕಳೆದ 75 ವರ್ಷಗಳಲ್ಲಿ ಕನ್ನಡದಲ್ಲಿ ತಯಾರಾಗಿರುವ ಸುಮಾರು 2500 ಚಿತ್ರಗಳಲ್ಲಿ ಕನಿಷ್ಠ 700 ಚಿತ್ರಗಳು ಸಾಹಿತ್ಯ ಕೃತಿಗಳನ್ನಾಧರಿಸಿವೆ. ಅಕ್ಷರ ಮಾಧ್ಯಮದ ಪ್ರಭಾವ ಇಷ್ಟು ಗಾಢ!



ಪಿ. ಶೇಷಾದ್ರಿ

ಖ್ಯಾತ ಚಲನ ಚಿತ್ರ ನಿರ್ದೇಶಕ

'ನೀವು ಎಷ್ಟು ಪುಸ್ತಕ ಓದಿದ್ದೀರಿ?'
ಎಂಬ ಪ್ರಶ್ನೆ ಕೇಳಿದಾಗ ಸಿಗುವ ಉತ್ತರಕ್ಕಿಂತ, 'ನೀವು ಎಷ್ಟು ಸಿನಿಮಾ ನೋಡಿದ್ದೀರಿ?' ಎಂಬ ಪ್ರಶ್ನೆಗೆ ಸಿಗುವ ಉತ್ತರ ಖಂಡಿತ ಭಿನ್ನವಾಗಿರುತ್ತದೆ! ನಮ್ಮ ನಡುವೆ ಪುಸ್ತಕ ಓದದವರು ಸಾಕಷ್ಟು ಸಂಖ್ಯೆಯಲ್ಲಿ ಸಿಗಬಹುದೇನೋ, ಆದರೆ ಸಿನಿಮಾ ನೋಡದ ಕಣ್ಣುಗಳು ಸಿಗುವುದು ಸ್ವಲ್ಪ ದುಸ್ತರವೇ!
ಹೌದು, ಈ ಸಿನಿಮಾದ ಮೋಡಿಯೇ ಅಂಥದ್ದು. ಈ ದೃಶ್ಯಮಾಧ್ಯಮದ ರಾಜನಿಗೆ ಇಷ್ಟೆಲ್ಲ ಮನ್ನಣೆ ಸಿಕ್ಕಿರುವುದರಲ್ಲಿ ಸಾಹಿತ್ಯ ಲೋಕದ ಕೊಡುಗೆಯೂ ಕಡಿಮೆಯೇನಿಲ್ಲ. ಚಲನಚಿತ್ರ ಮಾಧ್ಯಮವು ಅತ್ಯಂತ ಪ್ರಬಲವಾದ ಸಂವಹನ ಮಾಧ್ಯಮವಾಗಿ ಬೆಳೆದು ಉಳಿದಿರುವುದಕ್ಕೆ ಅದರ ಅತ್ಯಪೂರ್ವ ರೀತಿಯ 'ಕಥಾನಕ' ಸಾಧ್ಯತೆ ಒಂದು ಪ್ರಮುಖ ಕಾರಣ. ಹಾಗಾಗಿಯೇ ಯಾವುದೇ ಸಿನಿಮಾದ ಆತ್ಮವು 'ಕಥೆ' ಮತ್ತು ಕಥಾವಸ್ತುವಾಗಿದೆ.
ಪ್ರಕಟಿತ ಕಥೆಯನ್ನು ಆಧರಿಸಿದ ಜಗತ್ತಿನ ಮೊದಲ ಚಿತ್ರ (ದಿ ಗ್ರೇಟ್ ಟ್ರೈನ್ ರಾಬರಿ) ನಿರ್ಮಾಣವಾದದ್ದು 104 ವರ್ಷಗಳ ಹಿಂದೆ, 1903ರಲ್ಲಿ. ಆ ಚಿತ್ರ ಅಂದು ಗಳಿಸಿದ ಯಶಸ್ಸು ಸಿನಿಮಾಕ್ಕಿರುವ ಒಂದು ಬಹುಮುಖ್ಯ ಶಕ್ತಿ ಅಥವಾ ದೌರ್ಬಲ್ಯವನ್ನು ಆಗಲೇ ದಾಖಲಿಸಿಕೊಟ್ಟಿತು. ಕಳೆದ 75 ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ತಯಾರಾಗಿರುವ ಚಿತ್ರಗಳ ಸಂಖ್ಯೆ ಸರಿ ಸುಮಾರು ಎರಡೂವರೆ ಸಾವಿರದಷ್ಟು. ಇದರಲ್ಲಿ ಕನಿಷ್ಠ 700 ಚಿತ್ರಗಳು ಸಾಹಿತ್ಯಲೋಕದ ಪ್ರಕಾರಗಳಾದ ಕಥೆ/ಕಾವ್ಯ/ನಾಟಕ/ ಅಥವಾ ಕಾದಂಬರಿಗಳನ್ನು ಆಧರಿಸಿವೆ ಎನ್ನಬಹುದು. ಹಾಗಾಗಿ 'ಅಕ್ಷರಮಾಧ್ಯಮ'ದ ಪ್ರಭಾವ 'ದೃಶ್ಯಮಾಧ್ಯಮ'ದ ಮೇಲೆ ನಿರಂತರವಾಗಿ ಇದ್ದೇ ಇದೆ. ಕನ್ನಡದ ಪೂರ್ಣಪ್ರಮಾಣದ ಸಾಹಿತ್ಯ ಕೃತಿಯೊಂದು ಚಲನಚಿತ್ರವಾಗಿ ರೂಪಗೊಂಡದ್ದು 1921ರಲ್ಲಿ, 'ನಿರುಪಮಾ' ಹೆಸರಿನಲ್ಲಿ. ಇದು ನಾಟಕ ಕೃತಿ ಆಧರಿಸಿದ ಮೂಕಿಚಿತ್ರ. ಆನಂತರ, ಕೈಲಾಸಂ 'ವಸಂತಸೇನಾ' (1929), ಶಿವರಾಮ ಕಾರಂತರ 'ಭೂತರಾಜ್ಯ' (1929) ಬಂದವು.
ಚಿತ್ರರಂಗದ ಆರಂಭದಲ್ಲಿ ಕನ್ನಡದ ರಂಗಕೃತಿಗಳೇ ಚಿತ್ರಭಾಷೆಗೆ ತರ್ಜುಮೆಯಾಗುತ್ತಾ ಬಂದವು. 'ಸತಿ ಸುಲೋಚನ', 'ಸದಾರಮೆ', 'ಸಂಸಾರನೌಕೆ', 'ಭಕ್ತಧ್ರುವ', 'ಸತ್ಯಹರಿಶ್ಚಂದ್ರ', 'ಚಂದ್ರಹಾಸ' ಮುಂತಾದವು... ಹೀಗೆಯೇ ಆಧುನಿಕ ನಾಟಕಗಳಿಗೆ ಬಂದರೆ ಮಾಸ್ತಿಯವರ 'ಕಾಕನಕೋಟೆ', ಮೂರ್ತಿರಾಯರ 'ಆಷಾಢಭೂತಿ', ಮತ್ತು 'ಕಳಸಾಪುರದ ಹುಡುಗರು', 'ಸಿಕ್ಕು', 'ಋಷ್ಯಶೃಂಗ', 'ನಾಗಮಂಡಲ' ಹೀಗೆ...
ಕೃಷ್ಣಮೂರ್ತಿ ಪುರಾಣಿಕರ 'ಧರ್ಮದೇವತೆ'ಯನ್ನು ಆಧರಿಸಿದ 'ಕರುಣೆಯೇ ಕುಟುಂಬದ ಕಣ್ಣು' (1962) ತಾಂತ್ರಿಕವಾಗಿ ಕಾದಂಬರಿ ಆಧಾರಿತ ಮೊದಲ ಚಿತ್ರ ಎಂದು ಹೇಳಬಹುದು. ನಂತರ ಇದೇ ಲೇಖಕರ 'ಕುಲವಧು' ಹಾಗೂ ತರಾಸು ಅವರ 'ಚಂದವಳ್ಳಿಯ ತೋಟ' ಈ ಪರಂಪರೆಯನ್ನು ಮುಂದುವರಿಸಿದವು. 1966ರಲ್ಲಿ ತೆರೆಕಂಡ 'ಸಂಧ್ಯಾರಾಗ' ಅನಕೃ ಅವರ ಕಾದಂಬರಿಯನ್ನು ಆಧರಿಸಿದ್ದು. ಕನ್ನಡ ಚಿತ್ರರಂಗ ಇಲ್ಲಿಯವರೆಗೆ ಹಲವಾರು ಸಾಹಿತ್ಯ ದಿಗ್ಗಜರ ಸೇವೆಯನ್ನು ಪಡೆದಿದೆ. 'ಸತಿ ಸುಲೋಚನ' (1934) ಚಿತ್ರಕ್ಕೆ ಚಿತ್ರಸಾಹಿತ್ಯ ಒದಗಿಸಿದ ಬೆಳ್ಳಾವೆ ನರಹರಿಶಾಸ್ತ್ರಿಗಳಿಂದ ಹಿಡಿದು, ದೇವುಡುರಂಥವರನ್ನು ಒಳಗೊಂಡಂತೆ, ಕುವೆಂಪು, ಮಾಸ್ತಿ, ಬೇಂದ್ರೆ, ಶಿವರಾಮಕಾರಂತ, ಅನಕೃ, ಕೆ.ಎಸ್. ನರಸಿಂಹಸ್ವಾಮಿ, ಗೊರೂರು, ತರಾಸು, ತ್ರಿವೇಣಿ, ವಾಣಿ, ಎಂ.ಕೆ.ಇಂದಿರಾ, ವಿ.ಎಂ. ಇನಾಂದಾರ್, ಗಿರೀಶ ಕಾರ್ನಾಡ, ಎಸ್.ಎಲ್. ಭೈರಪ್ಪ, ಅನಂತಮೂರ್ತಿ, ಆಲನಹಳ್ಳಿ, ಚಿತ್ತಾಲ, ಚಂದ್ರಶೇಖರ ಕಂಬಾರ, ತೇಜಸ್ವಿ, ಲಂಕೇಶ್, ಬೊಳುವಾರು... ಹೀಗೆ ಇನ್ನೂ ಮುಂತಾದ ಅನೇಕ ಪ್ರಖ್ಯಾತ ಸಾಹಿತಿಗಳನ್ನು ಈ ಕ್ಷೇತ್ರ ದುಡಿಸಿಕೊಂಡಿದೆ.
ಕನ್ನಡದ ನಿರ್ದೇಶಕರಲ್ಲಿ ಹೆಚ್ಚು ಕಾದಂಬರಿಗಳನ್ನೇ ಆಧರಿಸಿ ಚಿತ್ರಮಾಡಿದ ಖ್ಯಾತಿ ಪುಟ್ಟಣ್ಣ ಕಣಗಾಲ್ ಅವರಿಗೆ ಸಲ್ಲಬೇಕು. ಅವರು ನಿರ್ದೇಶಿಸಿದ 33 ಚಿತ್ರಗಳಲ್ಲಿ ಹೆಚ್ಚಿನವು ಕಾದಂಬರಿಯನ್ನು ಆಧರಿಸಿದಂಥಹವು. 'ಬೆಳ್ಳಿಮೋಡ'ದಿಂದ ಆರಂಭವಾದ ಈ ಯಾತ್ರೆ 'ಗೆಜ್ಜೆಪೂಜೆ', 'ಶರಪಂಜರ', 'ನಾಗರಹಾವು', 'ಎಡಕಲ್ಲುಗುಡ್ಡದ ಮೇಲೆ', 'ಶುಭಮಂಗಳ', 'ಉಪಾಸನೆ', 'ಅಮೃತ ಘಳಿಗೆ', 'ಋಣಮುಕ್ತಳು'ಗಳಲ್ಲಿ ಮುಂದುವರಿಯಿತು. ಇವರು ನಿರ್ದೇಶಿಸಿದ 'ಕಥಾಸಂಗಮ' ಕನ್ನಡದ ಮೂರು ಸಣ್ಣ ಕಥೆಗಳನ್ನು ಆಧರಿಸಿ (ಗಿರಡ್ಡಿ ಗೋವಿಂದರಾಜು, ವೀಣಾ ಎಲಬುರ್ಗಿ, ಈಶ್ವರಚಂದ್ರ) ತಯಾರಾದ ಹೊಸಾ ಪ್ರಯೋಗ. ಹಾಗೆಯೇ 'ನಾಗರಹಾವು' ಕೂಡ ತ.ರಾ.ಸು. ಅವರ ಮೂರು ಕಾದಂಬರಿಗಳಾದ 'ನಾಗರಹಾವು', 'ಎರಡು ಹೆಣ್ಣು, ಒಂದು ಗಂಡು' ಮತ್ತು 'ಸರ್ಪಮತ್ಸರ'ಗಳನ್ನು ಆಧರಿಸಿದ ಚಿತ್ರ. ಈ ಚಿತ್ರ ಕಾದಂಬರಿಗಳಿಗಿಂತ ಹೆಚ್ಚು ಜನಪ್ರಿಯವಾಯಿತು. ಕಾದಂಬರಿಯಲ್ಲಿ ನಿರ್ಭಾವುಕವಾಗಿದ್ದ ನಾಯಕ ಪಾತ್ರಧಾರಿಯನ್ನು ಪುಟ್ಟಣ್ಣ ಇಲ್ಲಿ ಜೀವಂತವಾಗಿರಿಸಿದರು. ಜೊತೆಗೆ ಇದೇ ಚಿತ್ರದಲ್ಲಿ ಬರುವ ಚಾಮಯ್ಯ ಮೇಷ್ಟ್ರು ಪಾತ್ರ ಇಡೀ ಚಿತ್ರಕ್ಕೆ ಸಹಜತೆಯನ್ನು ತಂದುಕೊಟ್ಟು ಚಲನಚಿತ್ರವೊಂದರಲ್ಲಿ ಸೃಷ್ಟಿಯಾದ ಅತ್ಯುತ್ತಮ ಪಾತ್ರಗಳಲ್ಲೊಂದು ಎಂದು ಖ್ಯಾತವಾಯಿತು. ಆದರೆ ಕೃತಿಕಾರರು ಮಾತ್ರ ಚಿತ್ರವನ್ನು ಮೆಚ್ಚಲಲ್ಲಿ! ಇದನ್ನು ಕುರಿತು ತ.ರಾ.ಸು. 'ಇದು ನಾಗರಹಾವಲ್ಲ; ಕೇರೆಹಾವು' ಎಂದು ಜರೆದದ್ದೂ ನಡೆಯಿತು. ಆದರೂ ಈ ಚಿತ್ರ ವ್ಯಾಪಾರದ ದೃಷ್ಟಿಯಿಂದ ಯಶಸ್ವಿಯಾದದಷ್ಟೇ ಅಲ್ಲದೆ ಜನಪ್ರಿಯತೆಯನ್ನೂ ಪ್ರಶಸ್ತಿಗಳನ್ನೂ ಒಟ್ಟೊಟ್ಟಿಗೇ ಪಡೆಯಿತು.
'ವಂಶವೃಕ್ಷ' ಅದೇ ಹೆಸರಿನ ಎಸ್.ಎಲ್.ಭೈರಪ್ಪನವರ ಕಾದಂಬರಿಯನ್ನಾಧರಿಸಿ ಗಿರೀಶ್ ಕಾರ್ನಾಡ ಹಾಗೂ ಬಿ.ವಿ. ಕಾರಂತ್ ಜೋಡಿ ನಿರ್ದೇಶಿಸಿದ ಚಿತ್ರ. ಇದು ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಕೂಡ ಗಳಿಸಿತು. ಇದರ ಕಾದಂಬರಿ ಕತೃ ಭೈರಪ್ಪನವರಿಗೆ 1971ರ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿಯನ್ನು ನೀಡಿದಾಗ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದರು. ತಾವು ಸಿನಿಮಾಗಾಗಿ ಕಥೆ ಬರೆಯಲಿಲ್ಲವೆಂದೂ ತಮ್ಮ ಕಥೆಯನ್ನು ಸಿನಿಮಾ ಕಥೆಯಂತೆ ಪರಿಗಣಿಸಿರುವುದು ತಮಗೆ ಅವಮಾನವೇ ಆಗಿದೆಯೆಂದೂ ಹೇಳುವ ಧಾಟಿಯಲ್ಲಿ ಭೈರಪ್ಪನವರು ಬಹಿರಂಗ ಹೇಳಿಕೆಯೊಂದನ್ನು ನೀಡಿದರು. ಅವರ ಈ ಧೋರಣೆಗೆ ಪ್ರತಿಭಟನೆಗಿಂತ ಹೆಚ್ಚಾಗಿ ಪುರಸ್ಕಾರವೇ ಸಿಕ್ಕಿತು!
70ರ ದಶಕ ಕನ್ನಡದ ಚಿತ್ರರಂಗದ ಮಟ್ಟಿಗೆ ಸುವರ್ಣಯುಗ. ಸಾಹಿತ್ಯ ಲೋಕದ ಅನೇಕ ಪ್ರತಿಭೆಗಳು ಚಿತ್ರರಂಗ ಪ್ರವೇಶಿಸಿದವು. ಹಾಗಾಗಿಯೇ ಹೊಸ ಅಲೆ ಎಂಬ ಪ್ರಕಾರ ಕೂಡ ಜನಪ್ರಿಯವಾಗಿ ಇಡೀ ಭಾರತದ ಗಮನ ಸೆಳೆಯಿತು. ಈ ದಶಕದಲ್ಲಿ, 'ಸಂಸ್ಕಾರ', 'ಕಾಡು', 'ವಂಶವೃಕ್ಷ', 'ತಬ್ಬಲಿಯು ನೀನಾದೆ ಮಗನೆ', 'ಘಟಶ್ರಾದ್ಧ', 'ಹೇಮಾವತಿ', 'ಮೂರುದಾರಿಗಳು', 'ಅಬಚೂರಿನ ಪೋಸ್ಟಾಫೀಸ್', 'ಮಾಡಿ ಮಡಿದವರು', 'ಹಂಸಗೀತೆ', 'ಚೋಮನದುಡಿ', 'ಪಲ್ಲವಿ' ಮುಂತಾದ ಕಾದಂಬರಿ-ಕಥೆ ಆಧಾರಿತ ಚಿತ್ರಗಳು ಬಂದವು. ಮುಂದಿನ ವರ್ಷಗಳಲ್ಲೂ ಇದು ಮುಂದುವರಿದು, 'ಬ್ಯಾಂಕರ್ ಮಾರ್ಗಯ್ಯ', 'ತಬರನಕತೆ', 'ಭುಜಂಗಯ್ಯನ ದಶಾವತಾರ', 'ಮೈಸೂರು ಮಲ್ಲಿಗೆ', 'ಸಂಗ್ಯಾಬಾಳ್ಯಾ', 'ಗಂಗವ್ವ ಗಂಗಾಮಾಯಿ', 'ಮಲೆಗಳಲ್ಲಿ ಮದುಮಗಳು', 'ತಾಯಿಸಾಹೇಬ', 'ಕಾನೂರು ಹೆಗ್ಗಡಿತಿ', 'ದೇವೀರಿ'(ಅಕ್ಕ), 'ಮುತ್ತು ಚ್ಚೇರ'(ಮುನ್ನುಡಿ), 'ದ್ವೀಪ', 'ಹಸೀನ'... ಮುಂತಾದ ಮೌಲ್ಯಾಧಾರಿತ ಕೃತಿಗಳಿಗೆ ದಾರಿತೋರಿತು.
ಈ ಮಧ್ಯೆ 80ರ ದಶಕದ ಹೊತ್ತಿಗೆ ಹೊಸ ಅಲೆಯ ಪ್ರವಾಹ ತಗ್ಗಿತು. 'ಅಂತ', 'ಗಾಳಿಮಾತು', 'ಹೊಸಬೆಳಕು', 'ಹಾಲುಜೇನು', 'ಸಮಯದ ಗೊಂಬೆ', 'ಬಾಡದಹೂ' ಮುಂತಾದ ಚಿತ್ರಗಳು ನೆಪಮಾತ್ರಕ್ಕೆ ಕಾದಂಬರಿ ಆಧರಿಸಿದ ಚಿತ್ರಗಳು. ಇಲ್ಲೆಲ್ಲ ಪಾತ್ರದ ಹೆಸರು, ಕೆಲವು ಸಣ್ಣ ವಿಷಯಗಳನ್ನು ಕಾದಂಬರಿಯಿಂದ ಪಡೆದರೆ ಮುಗಿಯಿತು. ಉಳಿದಂತೆ ಕಾದಂಬರಿಯ ಯಾವ ಧ್ವನಿಯೂ ಚಿತ್ರದಲ್ಲಿ ಇರುತ್ತಿರಲಿಲ್ಲ. ಹೀಗೆ 80ರ ದಶಕದಲ್ಲಿ ಕ್ಷೀಣಿಸುತ್ತಾ ಬಂದ ಸಾಹಿತ್ಯ ಮತ್ತು ಸಿನಿಮಾ ಸಂಬಂಧ 90ರ ದಶಕದಲ್ಲಿ ಇನ್ನಷ್ಟು ವಿಷಮಿಸಿತು. ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಕಾದಂಬರಿ ಅಥವಾ ಸಿದ್ಧ ಸಾಹಿತ್ಯ ರೂಪ ಅವಲಂಬಿಸಿದ್ದವು. ಕನ್ನಡ ನೆಲಕ್ಕೆ ಒಗ್ಗುವ ಚಿತ್ರಗಳು ಕಣ್ಮರೆಯಾಗಿ ಹಾಲಿವುಡ್, ಬಾಲಿವುಡ್ ಸೇರಿದಂತೆ ಮಿಕ್ಕ ಭಾರತೀಯ ಚಿತ್ರಗಳ ಅಂಧಾನುಕರಣೆ ಹೆಚ್ಚಾಯಿತು. ಇನ್ನು ಚಿತ್ರಸಂಗೀತದತ್ತ ಒಂದಿಷ್ಟು ಗಮನಹರಿಸುವುದಾದರೆ, ಸಿನಿಮಾ ಗೀತೆಗಳ ರಚನೆಯಲ್ಲಿ 'ಸಂಗೀತವೇ ಗಂಡ; ಸಾಹಿತ್ಯವೇ ಹೆಂಡತಿ' ಎನ್ನುವ ಸ್ಥಿತಿ ಈಗಲೂ ಮುಂದುವರಿದುಕೊಂಡೇ ಬಂದಿದೆ. ಗಂಡ ಹೇಳಿದ ಹಾಗೆ ಹೆಂಡತಿ ಕೇಳಬೇಕು ಎಂಬ ಸಂಪ್ರದಾಯದಂತೆ!? ಮೊದಲ ಟಾಕಿಚಿತ್ರ 'ಸತಿಸುಲೋಚನ'ದಲ್ಲಿ ಕೂಡ ಮೊದಲು ಹಾಡಿನ ಸ್ವರ ಪ್ರಸ್ತಾರವನ್ನು ಅಣಿ ಮಾಡಿಕೊಂಡು ಅದಕ್ಕೆ ಪದಗಳನ್ನು ಜೋಡಿಸಿ ಹಾಡುಗಳನ್ನಾಗಿ ಮಾಡಲಾಗಿತ್ತಂತೆ.
1963ರಲ್ಲಿ ತೆರೆಗೆ ಬಂದ ಎಸ್.ಕೆ. ಚಾರಿ ನಿರ್ದೇಶಿತ 'ಗೌರಿ' ಪ್ರಪ್ರಥಮ ಬಾರಿಗೆ ಮಹಾಕವಿಗಳ ಕವಿತೆಗಳನ್ನು ಕನ್ನಡ ಚಿತ್ರಗಳಲ್ಲಿ ಅಳವಡಿಸುವುದನ್ನು ಪ್ರಾರಂಭಿಸಿದರು. ಕುವೆಂಪು ಅವರ 'ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು...', ಹಾಗೂ ಕೆ.ಎಸ್. ನರಸಿಂಹಸ್ವಾಮಿಗಳ 'ಇವಳು ಯಾರು ಬಲ್ಲೆಯೇನು?....' ಕವಿತೆಗಳು ಚಿತ್ರದ ಮೌಲ್ಯವನ್ನು ಹೆಚ್ಚಿಸಿದವು. ಮುಂದೆ ಪುಟ್ಟಣ್ಣ ಕಣಗಾಲ್ ದ.ರಾ. ಬೇಂದ್ರೆಯವರ, 'ಮೂಡಣ ಮನೆಯ...' ಹಾಡನ್ನು ಬಳಸಿದರು. ಇವರೇ ಮುಂದೆ ಜಿ.ಎಸ್. ಶಿವರುದ್ರಪ್ಪ, ಎಕ್ಕುಂಡಿ, ಸಿದ್ಧಲಿಂಗಯ್ಯ ಮುಂತಾದವರ ಕವಿತೆಗಳಿಗೆ ರಾಗ ಸಂಯೋಜಿಸಿದರು. ವೀ.ಸೀ.ಯವರ 'ಯಾವ ಜನ್ಮದ ಕಳೆಯೋ ಕಾಣೆನೋ...', ಬೇಂದ್ರೆಯವರ 'ಬಂದಿತೋ ಶೃಂಗಾರ ಮಾಸ..' ಗೋವಿಂದ ಪೈ ಅವರ 'ತಾಯೆ ಬಾರ ಮೊಗವ ತೋರ...', ಗೋಪಾಲಕೃಷ್ಣ ಅಡಿಗರ 'ಎಂಥ ಕಣ್ಣು...', ಲಕ್ಷ್ಮೀನಾರಾಯಣ ಭಟ್ಟರ 'ಎಂಥ ಮರುಳಯ್ಯ ಇದು ಎಂತ ಮರುಳು...', ಕುವೆಂಪು ಅವರ 'ನಾನೇ ವೀಣೆ, ನೀನೇ ತಂತಿ, ಅವನೇ ವೈಣಿಕ...', ಇವು ಇತರ ಕೆಲವು ಇಂಪಾದ ಸಾಹಿತ್ಯದ ಸೊಗಡಿರುವ ಗೀತೆಗಳು... ಹೀಗೆ ಸಾಹಿತ್ಯ, ನಾಟಕ, ಕಾವ್ಯ, ಕಥೆ, ಕಾದಂಬರಿ ಹಾಗೂ ಕವನಗಳನ್ನು ಬಳಸಿಕೊಂಡು ಕನ್ನಡಚಿತ್ರಗಳು ತಮ್ಮ ಮೌಲ್ಯ ಹೆಚ್ಚಿಸಿಕೊಂಡವು. ಇಷ್ಟೆಲ್ಲಾ ಆದರೂ ಶೈಕ್ಷಣಿಕ ಹಾಗೂ ಬೌದ್ಧಿಕ ವಲಯಗಳಲ್ಲಿ ಸಿನಿಮಾ ಬಗೆಗೆ ಹಿಂದಿನಂತೆ ಇಂದಿಗೂ ಕೀಳುಭಾವನೆ ಉಳಿದು ಬಂದಿದೆ. ಸರಳ ನಿರೂಪಣೆ, ಅಚ್ಚು ಹೊಯ್ದ ಪಾತ್ರಗಳು, ಪುನರಾವರ್ತಿತ ಸನ್ನಿವೇಶಗಳು, ಜೀವನಕ್ಕಿಂತ ಬೇರೆಯಾದ ಅವಾಸ್ತವ ಜಗತ್ತು ಇಲ್ಲಿ ಪ್ರತಿಬಿಂಬಿತವಾಗುತ್ತಿರುವುದೇ ಇದಕ್ಕೆ ಕಾರಣ. ಜೊತೆಗೆ ವ್ಯಾಪಾರೀಕರಣದ ಪ್ರಭಾವ ಇತ್ತೀಚಿನ ಚಲನಚಿತ್ರಗಳ ಮೇಲೆ ಆವರಿಸಿಕೊಂಡಿದೆ. ಇದರ ನಡುವೆ ಕಲೆಯನ್ನು ಹುಡುಕುವುದೆಲ್ಲಿ?

Comments

Popular posts from this blog

ದುರ್ಗದ ಮಳೆ

ಅಮಾಸೆ